ನಾರ್ಮನ್ನರು ಬರುವುದಕ್ಕೆ ಸ್ವಲ್ಪ ಸಮಯದ ಮೊದಲೇ ಊಳಿಗಮಾನ್ಯ ವ್ಯವಸ್ಥೆ ಇಂಗ್ಲೆಂಡಿನಲ್ಲಿ ತಲೆ ಇಕ್ಕಿತು. ಊಳಿಗಮಾನ್ಯ ಪದ್ಧತಿಯಲ್ಲಿ ಪ್ರತಿಯೊಬ್ಬನ ಕರ್ತವ್ಯಗಳೂ ಹಕ್ಕುಗಳೂ ಅವನಿಗೂ ಅವನು ಹೊಂದಿದ್ದ ಭೂಮಿಗೂ ಇದ್ದ ಸಂಬಂಧಕ್ಕೆ ಅನುಗುಣವಾಗಿ ಇರುತ್ತ್ತಿತ್ತು. ಊಳಿಗಮಾನ್ಯ ಪದ್ಧತಿಯಲ್ಲಿ ಆಸ್ತಿ ಪಡೆದವ ಯಾವ ಪ್ರಭುವಿನಿಂದ ಅದನ್ನು ಬೇಸಾಯಕ್ಕಾಗಿ ಪಡೆದನೋ ಅವನ ನಂಬಿಕೆಗೆ ಚ್ಯುತಿ ಬಾರದಂತೆ ಆತನಿಗೆ ವಿಧೇಯನಾಗಿ ನಡೆಯಬೇಕಿತ್ತು. ಆತನಿಗೆ ರಕ್ಷಣೆ ನೀಡುವುದು ಆ ಒಡೆಯನ ಹೊಣೆಯಾಗಿತ್ತು. ಇಡೀ ರಾಜ್ಯ ರಾಜನಿಗೆ ಸೇರಿದ್ದಾಗಿತ್ತು. ಅವನಿಂದಲೇ ಭೂಮಿಯನ್ನು ಪಡೆದವರು ಉನ್ನತ ಮಾನ್ಯತೆ ಪಡೆಯಲು ಅರ್ಹರಾಗಿದ್ದರು. ಅವರನ್ನು ಮುಖ್ಯ ಗೇಣಿದಾರರು (ಟೆನೆಂಟ್ಸ್-ಇನ್-ಚೀಫ್) ಎಂದು ಕರೆಯಲಾಗುತ್ತ್ತಿತ್ತು. ಆ ಒಡೆಯರೇ ತಮ್ಮ ಭೂಭಾಗದಲ್ಲಿ ನ್ಯಾಯಾಧೀಶರಾಗಿದ್ದರು. ಕರಾಕರ್ಷಣೆ ಇತ್ಯಾದಿಗಳನ್ನು ಮಾಡಲು ಹಕ್ಕುಳ್ಳವರಾಗಿದ್ದರು. ಅವರಿಗೆ ತಮ್ಮದೇ ಆದ ಸೈನ್ಯ, ನ್ಯಾಯಾಲಯ, ಕೋಟೆ, ಭಂಡಾರಗಳಿದ್ದುವು. ಇತರರು ಅವರಿಂದ ಭೂಮಿ ಪಡೆಯುತ್ತಿದ್ದರು. ಹಾಗೆ ಪಡೆದವರು ಅದನ್ನು ಬಳಿಕ ಇನ್ನೊಬ್ಬರಿಗೆ ಕೊಡಬಹುದಿತ್ತು. ತಮ್ಮ ಭೂ ಪ್ರದೇಶಗಳಲ್ಲಿ ನ್ಯಾಯ ಕೊಡುವುದು, ತೆರಿಗೆ ವಸೂಲು ಮಾಡುವುದು ಇತ್ಯಾದಿ ಹಕ್ಕುಗಳು ಅವರಿಗಿದ್ದುವು. ಕೆಳಗಿದ್ದವನು ಅವನ ಮೇಲಿನವರಿಗೆ ಅಧೀನನಾಗಿದ್ದ. ಹೀಗೆ ಕೇಂದ್ರದ ಅಧಿಕಾರ ಒಬ್ಬರ ಮೇಲೆ ಒಬ್ಬರಂತೆ ಹಂತ ಹಂತವಾಗಿ ಪ್ರಬಲರಾದ ಭೂಮಾಲೀಕ ಅಥವಾ ಪ್ರಭುಗಳ ಸ್ವಾಧೀನವಾಯಿತು. ಈ ಮಾನ್ಯಕ್ರಮದಿಂದ ಒಳ್ಳೆಯ ಸರ್ಕಾರಕ್ಕೆ ತೊಂದರೆಯಾದರೂ ಇದು ನಿರಂಕುಶ ಸರ್ಕಾರವನ್ನು ತಪ್ಪಿಸಿತು. ನಾರ್ಮನ್ ರಾಜಮನೆತನ ಒಂದು ರೀತಿಯಲ್ಲಿ ಈ ಪದ್ಧತಿಗೆ ಇನ್ನಷ್ಟು ಬಲ ಕೊಟ್ಟಿತು. ಆದರೆ ಇದನ್ನು ಹತೋಟಿಯಲ್ಲಿಡಲೂ ಒಂದು ಉಪಾಯ ಮಾಡಿತು. ಹಳೆಯ ಷೈರ್ ಮತ್ತು ಹಂಡ್ರೆಡ್ಸ್ ಕೋರ್ಟ್ಗಳನ್ನು ಊರ್ಜಿತವಾಗಿ ಟ್ಟದ್ದಲ್ಲದೆ ಅವನ್ನು ರಕ್ಷಿಸಿದ್ದೇ ಈ ಮನೆತನ ಕೈಕೊಂಡ ಉಪಾಯ.

ನಾರ್ಮನ್ ರಾಜರು ನಿರಂಕುಶರಾಗಿದ್ದರೂ ಅವರು ತಮ್ಮ ಪ್ರಜೆಗಳಲ್ಲಿ ಪ್ರಬಲರಾದವರ ಅನುಮತಿಯಿಲ್ಲದೆ ಕೆಲಸ ಮುಂದುವರಿಸದವರಾಗಿದ್ದರು. ನಾರ್ಮನ ದೊರೆಗಳ ಕಾಲದಲ್ಲಿ ಹಿಂದಿನ ಸಲಹಾಕೂಟಗಳಂತೆ ಗ್ರೇಟ್ ಕೌನ್ಸಿಲ್ ಎಂಬ ಸಭೆಯಿತ್ತು. ಅದು ನಿರ್ವಹಿಸುತ್ತಿದ್ದ ಕೆಲಸಗಳ ಜೊತೆಗೆ ಸಿವಿಲ್ ಮತ್ತು ಕ್ರಿಮಿನಲ್ ವ್ಯವಹಾರಗಳಲ್ಲಿ ಅತ್ಯುಚ್ಚ ನ್ಯಾಯಾಲಯ ವಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ನಾರ್ಮನ್ನರ ಕಾಲದಲ್ಲಿ ಪ್ರಧಾನಮಂತ್ರಿಗೆ ಜಸ್ಟಿಷಿಯರ್ ಎಂದು ಹೆಸರಿತ್ತು. ರಾಜ ಇಂಗ್ಲೆಂಡಿನಿಂದ ಹೊರಗೆ ಹೋದಾಗ ಆತನೇ ರಾಜನ ಪ್ರತಿನಿಧಿಯಾಗಿರುತ್ತಿದ್ದ. ಚಾನ್ಸಲರ್ ಎಂಬುವನು ರಾಜ್ಯದ ಕೋಶಾಧಿಕಾರಿಯಾಗಿದ್ದ. ರಾಜ್ಯದ ಪ್ರಮುಖ ಕಾರ್ಯಗಳೆಂದರೆ ನ್ಯಾಯ ಮತ್ತು ಯುದ್ಧ. ಇವುಗಳಿಗಾಗಿ ಒಂದು ಮಂಡಲಿ ಇತ್ತು. ಇದು ಹಣಕಾಸಿನ ವಿಚಾರವಾಗಿ ಕೆಲಸ ಮಾಡುವಾಗ ಎಕ್್ಸಚೆಕರ್ ಎಂದೂ ನ್ಯಾಯವಿಚಾರವಾಗಿ ಕೆಲಸ ಮಾಡುವಾಗ ಕ್ಯೂರಿಯ ರೀಜಿಸ್ ಅಥವಾ ದೊರೆಯ ನ್ಯಾಯಾಲಯ ಎಂದೂ ಕರೆಯಲಾಗುತ್ತಿತ್ತು.

ವಿಲಿಯಂ ದಿ ಕಾನ್ಕರರ್ ಎಂಬ ದೊರೆ ಹಂಡ್ರೆಡ್ಸ್ ಮತ್ತು ಷೈರ್ ಕೋರ್ಟುಗಳ ತಂಟೆಗೆ ಹೋಗಲಿಲ್ಲ. ಅವು ಒಂದನೆಯ ಎಡ್ವರ್ಡನ ಕಾಲದಲ್ಲಿ ಹೇಗೆ ಕೆಲಸ ಮಾಡುತ್ತಿದ್ದುವೋ ಹಾಗೆಯೇ ಮಾಡಬೇಕೆಂದು ಹೆನ್ರಿ I ನಿಯಮಿಸಿದ. ಅನೇಕ ವ್ಯಕ್ತಿಗಳಿಗೂ ಸಂಸ್ಥೆಗಳಿಗೂ ತಮ್ಮವೇ ಆದ ನ್ಯಾಯಾಲಯಗಳಿದ್ದವು. ಆದರೆ ರಾಜನೇ ಪ್ರಜೆಗಳ ಅತ್ಯುನ್ನತ ನ್ಯಾಯಾಧೀಶ. ಪ್ರಮುಖ ಸಿವಿಲ್ ಮತ್ತು ಕ್ರಿಮಿನಲ್ ವ್ಯವಹಾರಗಳಲ್ಲಿ ಅವನೇ ತೀರ್ಪು ನೀಡುತ್ತಿದ್ದದ್ದೂ ಇತ್ತು. ನಾರ್ಮನ್ನರ ಕಾಲದಲ್ಲಿ ನ್ಯಾಯವಿಧಾನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾದವು. ನ್ಯಾಯ ಮತ್ತು ಕರ ಇಲಾಖೆಗಳು ಪರಸ್ಪರ ಸಂಬಂಧಿ ವಿಭಾಗಗಳು. ಮೊಕದ್ದಮೆಯಲ್ಲಿಯ ಎರಡೂ ಪಕ್ಷದವರೂ ಪ್ರಜೆಗಳಾಗಿದ್ದರೆ ಎಕ್ಸ್ಚಕರಿನ ಪ್ರಮುಖ ಅಧಿಕಾರಿ ನ್ಯಾಯ ತೀರ್ಮಾನ ಮಾಡುತ್ತಿದ್ದ. ರಿಟ್ ಆಫ್ ಕ್ಯುಮೊನಿಸ್ ಎಂಬ ನಿರೂಪದ ಮೂಲಕ ಆ ಅಧಿಕಾರಿ ವಿವಾದವನ್ನು ತನ್ನ ಅಂಕೆಗೆ ಒಳಪಡಿಸುತ್ತಿದ್ದ. ಇದೊಂದು ವಿಚಿತ್ರವಾದ ನಿರೂಪ. ಇದರ ಪ್ರಕಾರ ವಾದಿ ರಾಜನಿಗೆ ಹಣ ಕೊಡಬೇಕು ; ಪ್ರತಿವಾದಿ ವಾದಿಗೆ ಹಣ ಕೊಡಬೇಕು. ಕೊಡಬೇಕಾದ್ದನ್ನು ಕೊಡದಿದ್ದುದರಿಂದ ವಾದಿ ಕೊಡಬೇಕಾದ ಹಣ ಬಾಕಿಯಾಯಿತೆಂದು ಪ್ರತಿವಾದಿಯ ಮೇಲೆ ತಪ್ಪು ಹೊರಿಸಲಾಗುತ್ತಿತ್ತು. ಖಜಾನೆಗೆ ಹಣ ಬಾಕಿಯಾದಲ್ಲಿ ಎಕ್್ಸಚೆಕರಿಗೆ ಹೇಗೂ ನ್ಯಾಯ ತೀರ್ಮಾನಿಸುವ ಹಕ್ಕಿತ್ತು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುತ್ತಿದ್ದ ರಾಜನ ನ್ಯಾಯಾಲಯಗಳು ಸ್ಥಳೀಯ ನ್ಯಾಯಾಲಯಗಳ ಕೆಲಸಕ್ಕೆ ಅಡ್ಡಿಯಾಗತೊಡಗಿದುವು. ಇದಕ್ಕಾಗಿ ಅವರು ಕ್ಯೂರಿಯ ರೀಜಿಸ್ ಮತ್ತು ರಾಯಲ್ ಕಮೀಷನರ ಸರ್ಕ್ಯೂಟ್ಗಳನ್ನು ಉಪಯೋಗಿಸಿಕೊಂಡರು. ರಾಜನಿಗೆ ಸಂಬಂಧಿಸಿದ ಮೊಕದ್ದಮೆಗಳಲ್ಲೂ ಪ್ರಬಲರಾದ ಗೇಣಿದಾರ ಮುಖ್ಯರಿರುವ ಸ್ಥಳೀಯ ನ್ಯಾಯಾಲಯಗಳು ನ್ಯಾಯ ಕೊಡಲು ಅಸಮರ್ಥವಾದಾಗಲೂ ಮತ್ತು ಅನುಮತಿಯಿಂದ ವಿವಾದವನ್ನು ಯಾರಾದರೊಬ್ಬನಿಗೆ ತನ್ನ ತೀರ್ಪಿಗಾಗಿ ತರಲು ಬಿಟ್ಟಾಗಲೂ ಕ್ಯೂರಿಯ ರೀಜಿಸ್ ನ್ಯಾಯ ತೀರ್ಮಾನ ಕೈಗೊಳ್ಳುತ್ತಿತ್ತು; ವಿಶಿಷ್ಟವಾದ ನಿರೂಪವೊಂದರ (ರಿಟ್) ಮುಖಾಂತರ ಸಿವಿಲ್ ಮೊಕದ್ದಮೆಗಳನ್ನು ತನ್ನ ಅಂಕೆಯೊಳಗೆ ತರುತ್ತಿತ್ತು. ಪ್ರತಿವಾದಿ ತಲೆಮರೆಸಿಕೊಂಡು ಅಲೆಯುತ್ತಿರುವನೆಂದು ಈ ನಿರೂಪದಲ್ಲಿ ಆಪಾದಿಸಿ ಈ ರೀತಿ ರಾಜನ ಶಾಂತಿಗೆ ಭಂಗ ತಂದದ್ದರಿಂದ ಆತನನ್ನು ಕೈದು ಮಾಡಿ ರಾಜನ ಕೋರ್ಟಿಗೆ ತರಲಾಗುತ್ತಿತ್ತು. ಕೆಳಗಿನ ಕೋರ್ಟುಗಳಿಗೆ ಆದೇಶ ನೀಡುವ ಹಕ್ಕು ಅದಕ್ಕಿತ್ತು. ಕೆಳಗಿನ ನ್ಯಾಯಾಧೀಶರ ನ್ಯಾಯಾಲಯಗಳಲ್ಲಿದ್ದ ಕಾಗದ ಪತ್ರಗಳನ್ನು ಪರಾಮರ್ಶೆಗಾಗಿ ಅದು ತರಿಸಿಕೊಳ್ಳುತ್ತಿತ್ತು. ಒಂದನೆಯ ಹೆನ್ರಿಯ ಕಾಲದಲ್ಲಿ ಸರ್ಕ್ಯೂಟ್ ಆಫ್ ರಾಯಲ್ ಕಮೀಷನರ್ಸ್ ಆರಂಭವಾಯಿತು. ಈ ಸಂಚಾರಿ ನ್ಯಾಯಾಧೀಶರು ಸ್ಥಳದಿಂದ ಸ್ಥಳಕ್ಕೆ ನಡೆದು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಇದರಿಂದಾಗಿ ಸಮಗ್ರ ಇಂಗ್ಲೆಂಡಿನಲ್ಲಿ ಒಂದೇ ವಿಧವಾದ ನ್ಯಾಯವ್ಯವಸ್ಥೆ ಇರುವಂತಾಯಿತು. ಇದು ಕೋರ್ಟುಗಳಿಗೂ ರಾಜನಿಗೂ ನಿಕಟ ಸಂಬಂಧವನ್ನೇರ್ಪಡಿಸಿತು. ಕ್ರಮೇಣ ಊಳಿಗಮಾನ್ಯ ಕೋರ್ಟುಗಳು ರಾಜನ ನ್ಯಾಯಾಲಯಗಳ ವಿಸ್ತೃತ ಶಕ್ತಿಯ ಎದುರು ಕಮರಿ ಹೋಯಿತು. ಎರಡನೆಯ ಹೆನ್ರಿಯ ಕಾಲದಲ್ಲಿ ಗ್ಲೆನ್ ವಿಲೆ ಎಂಬುವನು ಜಸ್ಟೀಷಿಯರ್ ಆಗಿದ್ದ. ಆತನ ಕಾಲದಲ್ಲಿ ಸ್ವತಂತ್ರ ಒಕ್ಕಲಿಗನ ಜಮೀನನ್ನು ಬಲಾತ್ಕಾರವಾಗಿ ಪ್ರಭು ಸೆಳೆದ ಪಕ್ಷದಲ್ಲಿ ಆ ಒಕ್ಕಲಿಗನಿಂದ ದೂರು ಬಂದರೆ ಅದನ್ನು ಪ್ರಭುವಿನ ನ್ಯಾಯಾಲಯದಿಂದ ಒಂದು ವಿಶಿಷ್ಟ ನಿರೂಪದ ಮೂಲಕ ತೆಗೆದುಕೊಂಡು ಒಕ್ಕಲಿಗನಿಗೆ ಸರಿಯಾಗಿ ನ್ಯಾಯ ಸಿಕ್ಕುವಂತೆ ವ್ಯವಸ್ಥೆ ಮಾಡುವ ಹಕ್ಕು ರಾಜನ ನ್ಯಾಯಸ್ಥಾನಕ್ಕೆ ಇತ್ತು. ಪೋನ್ ಎಂಬುದು ಆಗ ಜಾರಿಯಲ್ಲಿದ್ದ ಇನ್ನೊಂದು ಬಗೆಯ ನಿರೂಪ. ಅದರ ಮೂಲಕ ರಾಜನ ನ್ಯಾಯಸ್ಥಾನಗಳು ಷೆರೀಫನ ನ್ಯಾಯಾಲಯದಲ್ಲಿದ್ದ ಮೊಕದ್ದಮೆಗಳನ್ನು ತನ್ನ ತೀರ್ಮಾನಕ್ಕೆ ತರಲು ಸಾಧ್ಯವಾಗುತ್ತಿತ್ತು. ಸ್ಥಳೀಕರು ಪ್ರಮಾಣವಚನ ಸ್ವೀಕರಿಸಿ ಸಾಕ್ಷಿ ನುಡಿಯುವ ಕ್ರಮ ಜಾರಿಗೆ ಬಂತು. ಹೀಗೆ ಈತ ತಂದ ಕ್ರಮವೇ ಮುಂದೆ ನ್ಯಾಯದರ್ಶಿಗಳ (ಜ್ಯೂರಿ) ಮುಖಾಂತರ ನ್ಯಾಯ ತೀರ್ಮಾನ ಮಾಡುವ ಕ್ರಮಕ್ಕೆ ಬುನಾದಿಯಾಯಿತು.

ಎರಡನೆಯ ಹೆನ್ರಿಯ ಕಾಲಕ್ಕೆ ಸಕೂರ್್ಯಟ್ ಆಫ್ ರಾಯಲ್ ಕಮಿಷನರ್ಸ್ ಶಾಶ್ವತವಾ ಯಿತು. ಸ್ಥಳೀಯವಾಗಿದ್ದ ನ್ಯಾಯಾಲಯಗಳ ಕಾರ್ಯಗಳಲ್ಲಿ ಇದು ಆಕ್ರಮಣ ಮಾಡಿತು. ಈ ನ್ಯಾಯಾಲಯಗಳು ಸ್ಥಳದಿಂದ ಸ್ಥಳಕ್ಕೆ ಹೋಗಿ ನ್ಯಾಯ ಕೊಡುತ್ತ್ತಿದ್ದುವು. ಬೇರೆ ಬೇರೆ ಸ್ಥಳಗಳಲ್ಲಿ ವಿಧವಿಧವಾದ ನ್ಯಾಯ ನೀಡುವ ಬದಲು ಒಂದೇ ರೀತಿಯ ನ್ಯಾಯವ್ಯವಸ್ಥೆಯನ್ನು ಇದು ಅನುಸರಿಸಲಾರಂಭಿಸಿತು.

ನಾರ್ಮನ್ನರ ಕಾಲದಲ್ಲಿ ಟೌನ್ಷಿಪ್ಗಳು ಮೇನರುಗಳಾದುವು. ಅಲ್ಲಿನ ನಿವಾಸಿಗಳ ಕೂಟವೇ ಅವರ ನ್ಯಾಯಾಲಯವಾಯಿತು. ಮೇನರುಗಳ ಮೇಲೆ ಹಂಡ್ರಡ್ಡುಗಳ ಅಧಿಕಾರ ಈ ಸಮಯದಲ್ಲಿ ಕಳಚಿಹೋಯಿತು. ಹಂಡ್ರಡ್ ನ್ಯಾಯಾಲಯಗಳ ಕೆಲಸ ದಿನದಿನಕ್ಕೆ ದುರ್ಬಲವಾಗತೊಡಗಿತು. ಷೈರುಗಳು ನಾರ್ಮನ್ ಆಕ್ರಮಣವನ್ನು ತಡೆದುಕೊಂಡರೂ ಷೆರಿಫರ ಅಧಿಕಾರ ಮತ್ತು ರಾಜನ ಸಂಚಾರಿ ನ್ಯಾಯಾಲಯದ ಅಧಿಕಾರ ವಿಸ್ತರಿಸಿತ್ತು. ನ್ಯಾಯಸಂಬಂಧವಾಗಿ ಷೆರಿಫ್ ರಾಜನ ಪ್ರತಿನಿಧಿಯಾಗಿ ಷೈರ್ ನ್ಯಾಯಾಲಯದ ಕೆಲಸದಲ್ಲಿ ಕೈಹಾಕುತ್ತಿದ್ದ. ಆತ ಅದರ ಅಧ್ಯಕ್ಷ. ಸ್ಥಳೀಯ ನ್ಯಾಯಾಲಯದಿಂದ ತೆಗೆದು ತಂದ ಮೊಕದ್ದಮೆಗಳನ್ನು ಆತ ರಾಜನ ಪ್ರತಿನಿಧಿಯಾಗಿ ವಿಚಾರಿಸುತ್ತಿದ್ದ. ಪಟ್ಟಣಗಳು ಬೆಳೆದುವು. ಸ್ಥಳೀಯ ನ್ಯಾಯಾಲಯಗಳಿಗೆ ಮನ್ನಣೆ ದೊರಕಿತು.

ವಿಲಿಯಂ ದಿ ಕಾನ್ಕರರಿನ ಕಾಲದಲ್ಲಿ ಸಿವಿಲ್ ಕೋರ್ಟುಗಳು ಧರ್ಮೀಯ ನ್ಯಾಯಾಲಯಗಳಿಂದ ಬೇರ್ಪಟ್ಟವು. ಮೊದಲು ಬಿಷಪ್ ಷೆರೀಫನೊಂದಿಗೆ ಕುಳಿತು ನ್ಯಾಯ ಕೊಡುತ್ತಿದ್ದರೆ ಈಗ ಅವನದೇ ಸ್ವತಂತ್ರ ನ್ಯಾಯಾಲಯವಾಯಿತು. ಅಲ್ಲಿ ಧರ್ಮಕ್ಕೆ ಸಂಬಂಧಪಟ್ಟ ತಪ್ಪುಗಳ ಇತ್ಯರ್ಥವಾಗುತ್ತಿತ್ತು. ಕಡೆಗೆ ಚರ್ಚಿಗೆ ಸೇರಿದ ಧರ್ಮಗುರುಗಳ ತಪ್ಪನ್ನು ಇತ್ಯರ್ಥಿಸುವ ಹಕ್ಕು ಅವರಿಗೆ ಸೇರಿತು. ಅಲ್ಲಿ ಸಂಪ್ರದಾಯನ್ಯಾಯವನ್ನು ಜಾರಿ ಮಾಡದೆ ಮತೀಯ ನ್ಯಾಯವನ್ನು (ಕ್ಯಾನನ್ ಲಾ) ಜಾರಿ ಮಾಡಲಾಗುತ್ತಿತ್ತು. ಆದರೆ ಕಾನ್ಕರರ್ ವಿಲಿಯಂ ಬಿಷಪ್ ಮುಂತಾದವರನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಸಾಕಷ್ಟು ಶ್ರಮವಹಿಸಿದ್ದ. ಒಂದನೆಯ ಮತ್ತು ಎರಡನೆಯ ವಿಲಿಯಮರೂ ಒಂದನೆಯ ಹೆನ್ರಿಯೂ ಇಂಗ್ಲಿಷ್ ಶ್ರೀಮಂತ ವರ್ಗವನ್ನು ತಮ್ಮ ಅಂಕೆಯಲ್ಲಿಡುವಷ್ಟು ಬಲಿಷ್ಠರಾಗಿದ್ದರು. ಸ್ಟೀಫನ್ನನ ಕಾಲದಲ್ಲಿ ಅರಸರ ಅಂಕೆ ತಪ್ಪಿ ಮತ್ತೆ ಶ್ರೀಮಂತರು ಬಲಿಷ್ಠರಾದರು. ಇವರು ಹೆಚ್ಚಿನ ಮಟ್ಟಿಗೆ ಇಂಗ್ಲಿಷರಾಗಿದ್ದರು.

ಎರಡನೆಯ ಹೆನ್ರಿ ಬುದ್ಧಿವಂತ. ಒಂದನೆಯ ಹೆನ್ರಿಯಂತೆ ಅವನೂ ಕಟ್ಟುನಿಟ್ಟಾದ ನ್ಯಾಯವ್ಯವಸ್ಥೆ ಸ್ಥಾಪಿಸಿದ: ಯಾರೇ ಆಗಲಿ, ರಾಜನ ನ್ಯಾಯಾಲಯಕ್ಕೆ ಬಗ್ಗುವಂತೆ ಮಾಡಿದ. ಪ್ರತಿಯೊಬ್ಬ ಪ್ರಭುವೂ ಆತನಿರುವಲ್ಲಿಗೆ ನ್ಯಾಯಾಲಯ ಆಗಮಿಸಿದಾಗ ಅದನ್ನು ಸ್ವಾಗತಿಸಬೇಕಿತ್ತು. ಸ್ವಾಧೀನವಿರುವ ಅಪರಾಧಿಯನ್ನು ಹಿಡಿಯಲು ಬಂದಾಗ ಪ್ರಭುಗಳು ಅವರಿಗೆ ಸಹಾಯ ಮಾಡಬೇಕಿತ್ತು. ಇದರಿಂದಾಗಿ ರಾಜನ ನ್ಯಾಯ ಎಲ್ಲದಕ್ಕಿಂತ ಮಿಗಿಲಾಗಿ ನಿಂತಿತು. ಅದು ನ್ಯಾಯದ ವಿಚಾರದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ತಂದಿತು. ಅವನು ಚರ್ಚುಗಳ ನ್ಯಾಯಪಾಲನೆಯನ್ನು ಹತೋಟಿಗೆ ತರಲು 1164ರಲ್ಲಿ ಕ್ಲಾರೆಂಡನ್ ಸಂವಿಧಾನವೆಂಬ ನಿಯಮಾವಳಿ ತಂದ. ಆದರೆ ಆತನ ಪ್ರಯತ್ನ ಪೂರ್ಣ ಫಲಪ್ರದವಾಗಲಿಲ್ಲ. ಆತನ ಕಾಲದಲ್ಲಾದ ಅನೇಕ ಕಾನೂನುಗಳು ಸಾಮನ್ಯ ಜನತೆಯ ಏಳ್ಗೆಯನ್ನು ತುಂಬ ಸಾಧಿಸಿದುವು. 

ಸ್ಟೀಫನ್ ಮತ್ತು ಮೆಟಿಲ್ಡಾರ ಯಾದವೀ ಕಲಹ ನಾರ್ಮನ್ನರ ಕಾಲದಲ್ಲಿ ಕಟ್ಟಿದ ನ್ಯಾಯಕ್ರಮವನ್ನು ಹಾಳುಮಾಡಿತು. ಎರಡನೆಯ ಹೆನ್ರಿ ಅವುಗಳನ್ನು ತಿರುಗಿ ಸ್ಥಾಪಿಸಿ, ವಿಸ್ತಾರಗೊಳಿಸಿ ಕ್ರಮಗೊಳಿಸಿದ. ಆತನ ಕಾಲದಲ್ಲಿ ಕ್ಯೂರಿಯ ರೀಜಿಸ್ ಎಲ್ಲ ಕೋರ್ಟುಗಳ ಕೆಲಸವನ್ನೂ ಸೆಳೆದುಕೊಂಡಿತು. ಅವುಗಳ ನ್ಯಾಯಕ್ರಮ ಸುಧಾರಿತವೂ ಪರಿಣಾಮಕಾರಿಯೂ ಆಗಿತ್ತು. ಆತ 1178ರಲ್ಲಿ ಐದು ಜನ ನ್ಯಾಯಾಧೀಶರ ಸಮಿತಿ ಮಾಡಿ ಅದಕ್ಕೆ ನ್ಯಾಯತೀರ್ಮಾನದ ಸಾಮಾನ್ಯ ಕೆಲಸಗಳನ್ನೆಲ್ಲ ಕೊಟ್ಟ. ಹೆಚ್ಚಿನ ಮಹತ್ತ್ವದ ವ್ಯವಹಾರಗಳಲ್ಲಿ ಮಾತ್ರ ಆತ ಕೈಯಿಕ್ಕುತ್ತಿದ್ದ. ಹೀಗೆ ರೋಮನ್ ನ್ಯಾಯ ಜಾರಿ ಮಾಡುವ ಅತಿ ಪ್ರ್ರಾಚೀನವಾದ ಮೂರು ಪ್ರಮುಖ ನ್ಯಾಯಾಲಯಗಳಲ್ಲಿ ಒಂದಾದ ಕೋರ್ಟ್ ಆಫ್ ಕಾಮನ್ ಪ್ಲೀಸ್ ಆರಂಭವಾಯಿತು. ಆತನ ಕಾಲದಲ್ಲಿ ಸಂಚಾರಿ ನ್ಯಾಯಾಲಯಗಳ ಅಧಿಕಾರ ಹೆಚ್ಚಿತು. ಷೆರಿಫನ ಅಧಿಕಾರ ಕಮ್ಮಿಯಾಗುತ್ತ ನಡೆಯಿತು. ಕಡೆಗೆ ಆತ ಎಲ್ಲ ಷೆರಿಫರನ್ನೂ ತೆಗೆದು ಹಾಕಿದ. ರಾಜನ ನ್ಯಾಯಾಲಯಗಳು ಬೇರೆ ನ್ಯಾಯಾಲಯಗಳನ್ನು ಬದಿಗಿರಿಸುವ ಕೆಲಸವನ್ನು ವಿವಿಧ ನಿರೂಪಗಳ (ರಿಟ್) ಮುಖಾಂತರ ಸಾಧಿಸಿದುವು. ಈ ನಿರೂಪಗಳು ಹುಟ್ಟಿ ಸಂಪ್ರದಾಯನ್ಯಾಯವನ್ನು ತಂದಿತೆಂದು ಹೇಲ್ಡ್ವರ್ತ್ ಹೇಳುತ್ತಾನೆ. ಈ ಸಾಧನೆಯ ಕಾಲ ಪ್ರ.ಶ. 1150 ರಿಂದ 1250. ಗ್ರಾಂಡ್ ಜ್ಯೂರಿ ಕ್ರಮ 1666ರಲ್ಲಿ ಆರಂಭವಾಯಿತು. ಅವರು ಆಪಾದಿತನನ್ನು ತಂದು ತಪ್ಪನ್ನು ಅವನ ಮೇಲೆ ಹೊರಿಸುತ್ತಿದ್ದರು. ಆಪಾದಿತನಾದವ ಉಗ್ರ ವಿಚಾರಣೆಗೆ ಒಳಗಾಗುತ್ತಿದ್ದ. ಅದರಲ್ಲಿ ಸೋತರೆ ಅವನಿಗೆ ಶಿಕ್ಷೆ ಕೊಡಲಾಗುತ್ತಿತ್ತು. 1215ರಲ್ಲಿ ಉಗ್ರ ಶಿಕ್ಷಾಕ್ರಮ ನ್ಯಾಯಬಾಹಿರವೆಂದು ಸಾರಲಾಯಿತು. ಅದರ ಬದಲಾಗಿ ಈಗ ಇರುವಂತೆ ಪೆಟಿ ಜ್ಯೂರಿ ಕ್ರಮ ಜಾರಿಗೆ ಬಂತು.

ಒಂದೂರಿನಿಂದ ಇನ್ನೊಂದೂರಿಗೆ ರಾಜನ ನ್ಯಾಯಾಲಯ ಹೋಗುತ್ತಿದ್ದುದರಿಂದ ಜನರಿಗೆ ತುಂಬ ತೊಂದರೆಯಾಗುತ್ತಿತ್ತು. ನ್ಯಾಯಕ್ಕಾಗಿ ಜನ ನ್ಯಾಯಾಲಯ ಹೋದಲ್ಲಿಗೆಲ್ಲ ಹೋಗಬೇಕಾಗುತ್ತಿತ್ತು. 1215ರಲ್ಲಿ ಜಾನ್ ದೊರೆಯಿಂದ ಪಡೆದ ಮಹಾಸನ್ನದು ಇದನ್ನು ಸರಿಪಡಿಸಿತು. ಕೋರ್ಟ್ ಆಫ್ ಕಾಮನ್ಸ್ ಪ್ಲೀಸ್ ಒಂದೇ ಕಡೆಗೆ ನಿಂತು ನ್ಯಾಯ ಕೊಡುವಂತೆ ಅದರಲ್ಲಿ ಸವಲತ್ತು ಕೊಡಲಾಗಿತ್ತು. ಅದರಂತೆ ಕೋರ್ಟು ವೆಸ್ಟ್ ಮಿನ್ಸ್ಟರಿನಲ್ಲಿ ನೆಲೆ ನಿಂತು ನ್ಯಾಯ ಕೊಡತೊಡಗಿತು. ಕ್ಯೂರಿಯ ರೀಜಿಸ್ನೊಂದಿಗೆ ಇದ್ದ ಅದರ ಸಂಬಂಧ ಕಳಚಿತು. ಈ ಸನ್ನದಿನ ಇನ್ನೊಂದು ಕಲಮಿನ ಪ್ರಕಾರ ಸ್ಥಿರ ಆಸ್ತಿಗೆ ಸಂಬಂಧಿಸಿದ ವ್ಯವಹಾರದ ತಕ್ಸೀರುಗಳನ್ನು ತೀರ್ಮಾನಿಸಲು ನ್ಯಾಯಾಧೀಶರು ವರ್ಷಕ್ಕೆ ನಾಲ್ಕು ಬಾರಿ ಪರಿಭ್ರಮಣೆ ಗೈಯಬೇಕಿತ್ತು.

ಒಂದನೆಯ ಎಡ್ವರ್ಡ್ ಚರ್ಚ್ ನ್ಯಾಯಾಲಯಗಳ ನ್ಯಾಯತೀರ್ಮಾನದ ಹಕ್ಕನ್ನು ಕಡಿಮೆ ಮಾಡಲು ಯತ್ನಿಸಿದ. ಅವರಿಗೆ ಧರ್ಮಕ್ಕೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮಾತ್ರ ತೀರ್ಮಾನಿಸುವ ಹಕ್ಕು ಕೊಡಲಾಗಿತ್ತು. ಚರ್ಚಿಗೆ ಸಂಬಂಧಿಸಿದ ಜನರ ಅಪರಾಧವನ್ನು ತೀರ್ಮಾನಿಸುವ ಹಕ್ಕೂ ಉಳಿದಿತ್ತು. ಕಾಮನ್ ಪ್ಲೀಸಿನ ಕೋರ್ಟು, ಕ್ಯೂರಿಯ ರೀಜಿಸ್ ನ್ಯಾಯಾಲಯಗಳು ಮತ್ತು ಎಕ್ಸ್ಚೆಕರ್ ಇವು ಸ್ವತಂತ್ರವಾಗಿ ಒಂದಕ್ಕೊಂದು ಸಂಬಂಧವಿಲ್ಲದೆ ಅವನ ಕಾಲದಲ್ಲಿ ಕೆಲಸ ಮಾಡತೊಡಗಿದುವು. ಅವುಗಳಿಗೆ ಆಡಳಿತದ ಹಕ್ಕು ಇರಲಿಲ್ಲ. ಎಕ್ಸ್ಚೆಕರ್ ಕೋರ್ಟಿಗೆ ರಾಜನ ಬೊಕ್ಕಸದ ವಿಚಾರದಲ್ಲಿಯ ವ್ಯವಹಾರಗಳನ್ನು ಕೈಗೊಳ್ಳುವ ಹಕ್ಕು ಇತ್ತು. ಒಂದನೆಯ ಎಡ್ವರ್ಡನ ಕಾಲದಲ್ಲಿ ರಾಜನ ನ್ಯಾಯ ಸುಭದ್ರವಾಗಿ ನಿಂತಿತು.

ಪ್ರಮುಖ ವ್ಯವಹಾರಗಳಲ್ಲಿ ತೀರ್ಮಾನ ಕೊಡುವ ಹಕ್ಕುಗಳನ್ನು ರಾಜ ಇಟ್ಟುಕೊಂಡಿದ್ದ. ಚಾನ್ಸಲರನ ಮುಖಾಂತರ ಅವನಿಂದ ನ್ಯಾಯ ಬಯಸಿ ಅವನಿಗೆ ಅರ್ಜಿ ಕೊಡಬಹುದಿತ್ತು. ರಾಜನಿಗೆ ನ್ಯಾಯ ತೀರ್ಮಾನದಲ್ಲಿ ಸಹಾಯ ಮಾಡಲು ಅವನ ಪರಿವಾರದವರು, ಅಧಿಕಾರಿಗಳು, ನ್ಯಾಯಾಧೀಶರು ಮುಂತಾದವರನ್ನು ಒಳಗೊಂಡ ಒಂದು ಸಮಿತಿಯಿತ್ತು. ಕಟ್ಟಕಡೆಗೆ ಇದೇ ಸಮಿತಿ ಪ್ರೀವಿ ಕೌನ್ಸಿಲ್ ಆಗಿ ಮಾರ್ಪಟ್ಟಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ